Tuesday, July 3, 2012

ಅದು ಎದೆಯೊಳಗಿನ ದನಿ ..

ಎರಡೂ ತೋಳುಗಳಲ್ಲಿ ನನ್ನೆರೆಡು ಸೊಸೆಯಂದಿರನ್ನ ಎತ್ತಿಕೊಂಡು ನಗುತ್ತಿದ ಅಮ್ಮ , ಅದೊಂದೇ ಶಾಶ್ವತ ಎನ್ನುವ ಸಂದೇಶ ಕೊಡುತ್ತಿದ್ದಾಳ ??. ಆ ಭಾವಚಿತ್ರ ನೋಡಿದಾಗಲೆಲ್ಲ ಮೂಡುವ ಚಿತ್ರಭಾವಗಳ ಮೆರವಣಿಗೆ ಯಾಕೋ ಕುಶಿಯದ್ದಲ್ಲ ಅನಿಸುತ್ತಿದೆ.
"ಅಪೀ ಯಾವಾಗ ಮನೆಗ್ ಬತ್ಯ " ಎಂಬ ಸದ್ದು ನಿಂತು ಎರಡುವರ್ಷಗಳ ಮೇಲಾದುವಲ್ಲ??!!. ಸದ್ದೇ ಇಲ್ಲದೆ ಎದೆಗೂಡಿನೊಳಗೆ ಹೊಕ್ಕುನಿಂತಿದ್ದ ಯಮರಾಕ್ಷಸ , ಕಲ್ಪಿಸಿಕೊಂಡೆ ಇಲ್ಲದಿದ್ದ ಅಮ್ಮನಿರದ ಜಗತ್ತನ್ನ ನಲವತ್ತೈದೆ ದಿವಸದಲ್ಲಿ ಕೊಟ್ಟಿದ್ದಷ್ಟೇ ಉಡುಗೊರೆ.

"ಎಂಟ್ ಗಂಟೆಯಾತು ಏಳಾ ಶ್ರೀಪಾದೂ"  ಎಂದು ಅಂದೆಬ್ಬಿಸುತ್ತಿದ್ದ ಅಮ್ಮನ ದ್ವನಿ ಇವತ್ತಿನ ನಿದ್ದೆ ಬರದ ರಾತ್ರಿಗಳಲ್ಲಿ ಯಾಕೋ ಅನುರಣಿಸುತ್ತಿದೆ.ನಿಂಗೆ ಚನಾಗಿ ಸಂಬಳ ಬಪ್ಪಲೆ ಹಿಡಿದ ಮೇಲೆ ನಾನೊಂದ್ ಸರ್ತಿ ನಾರ್ತ್ ಇಂಡಿಯ ಟೂರ್ ಹೊಗಿಬರಲಾ ಅಂತ ಕೇಳಿದ್ದ ಅಮ್ಮನ  ಅಪೇಕ್ಷೆ , ಎಂದಿದಿಗೂ ಅಪೇಕ್ಷೆಯಾಗೆ ಉಳಿಸಿದ್ದು ಮತ್ತೆಂದಿಗೂ ಪೂರೈಸಲಾಗದ ಅಪ್ಪಿಯಾಗೆ ನಾನುಳಿದು ಬಿಟ್ಟದ್ದು. ಎಲ್ಲವೂ ಆ ನಗುವಿನಲ್ಲೇ ಲೀನ.

ಅಮ್ಮನ ಅತೀ ಪ್ರೀತಿಯ ಗಡ್ಬಡ್., ಇಷ್ಟಪಟ್ಟು ತಂದು ತಿನ್ನುತ್ತಿದ್ದ ಕಲ್ಲಂಗಡಿ ಹಣ್ಣು , ಅಮಾ ನೋಡು ನಿನ್ನ ಮಗನ ಸಂಬಳದಿಂದ ತಂದದ್ದೆಂದು ಎದುರಿಗೆ ಕುಳಿತು ತಿನ್ನಿಸಲಾರದೆ ಹೋಗದ್ದು ಇವತ್ತು ನಗು ನೋಡಿದೊಡನೆ ದಿಗ್ಗನೆದ್ದು ಕಾಡಿಸುತ್ತಿದೆ. ಎಲ್ಲರ ಮಕ್ಕಳನ್ನ ಬರಗಿ ಮುದ್ದಾಡುತ್ತಿದ್ದ ಪ್ರೀತಿಯ ಅಜ್ಜಿ ಸ್ವಂತ ಮಗಳ-ಮಗಳನ್ನ ಸಂತೃಪ್ತಿಯಾಗುವಷ್ಟು ಮುದ್ದಾಡಲಾಗದಷ್ಟು ಕಮ್ಮಿ ಸಮಯ ಕೊಟ್ಟ ದೇವರ ಮೇಲೆ ಜಗಳ ಕಾದುಬಿಡುವ ಮನಸು.

ನನ್ನೆಲ್ಲ ಪ್ರೀತಿ ಸಿಟ್ಟು ಸ್ವಾಮ್ಯಭಾವ ಎಲ್ಲವನ್ನೂ ಧರಿಸಬಲ್ಲ ಆಕೆ ಮತ್ತೆಂದೂ ಬರಲಾರಳು.ಬ್ರೇಕ್ ಅಪ್ಪೇ ಆಗದ ಆ ಲವ್ವು  ಮತ್ತೊಂದಿರಲಾರದು .  ಮತ್ತಾರೂ ಕರೆಯದ ಆ ದ್ವನಿ ಇನ್ದೇಕೂ ನಿರಂತರ
"ಅಪೀ "

Monday, July 2, 2012

., . ಮಳೆ -ಕಾಲ

ಅರ್ಧಂಬರ್ದ ಮಳೆ ಬಂದು ನಿಂತ ನಮ್ಮೊರಿನ ಬಸ್ ಸ್ಟ್ಯಾಂಡ್ ಇಳಿದು  ನೋಡಿದಕೂಡಲೇ ಹಸಿರೆಲ್ಲ ಮೈಯಲ್ಲಿ  ಎಂತದೋ ರೋಮಾಂಚನ.ಬೆಂಗಳೂರಿನ  ಮಣ್ಣಿಗೆ ಅದರ ವಾಸನೆಗೆ ಅಲ್ಲಿನ ಪಿರಿ ಪಿರಿ ಮಳೆಗೆ  ಇಲ್ಲದ ಎಂತದೋ ಅದೃಶ್ಯ ಸೆಳೆತ ಈ ಬೆಳಗಿನ ಮಳೆಗೆ.ಮಳೆಯ ಹನಿ ಎದೆಯೊಳಗೆ ಇಳಿದು ತೊಯ್ದಂತ ಭಾವ.ಹಸಿ ಹಸಿರು ಮರಗಳ ಮಧ್ಯ ಕೊನೆಯೇ ಇಲ್ಲದೆ ಚಳಿಗೆ ಹೊದೆದು ಮಲಗಿಬಿಟ್ಟಿರುವ ನೀಲಿ ನೀಲಿ ರೋಡು.

ಅಖಂಡ ಇಪ್ಪತ್ತು ವರ್ಷಗಳ ಕಾಲ ಇದೆ ಮಳೆಯ , ಇದೆ ಕೆಸರಿನ ತೊಯ್ದೂ ತೊಯ್ಯದ ಕೊಡೆಯ ಸೂಡಿನ ನಡುವೆಯೂ ನೆಡೆದು ಬದುಕ ಕಂಡಿದ್ದರೂ ಎಂದೂ ಆಗದ ಅನುಭವ ಖಾಲಿ ಕೇವಲ ೨ ವರ್ಷಗಳ ಬೆಂಗಳೂರಿನ ಬದುಕು ನಮ್ಮ ದೃಷ್ಟಿಕೋನದ ದಿಕ್ಕನ್ನೇ ಬದಲಿಸಿಬಿಡುವ ವಿಸ್ಮಯದ ಬಗ್ಗೆ ಸಣ್ಣ ನಗು

ಇಷ್ಟಿಷ್ಟು ದುಡ್ಡು ಕೊಟ್ಟು ಬದುಕ ಕಟ್ಟುವ ಬೆಂಗಳೂರಿನ ಬಗೆಗೆ ಅನಿವಾರ್ಯ ಮೆಚ್ಚಿಗೆ ಜೊತೆ ಜೊತೆಗೆ ., ಮೈ ಮನವ ತಂಪು ಮಾಡುವುದು ಕೇವಲ ಹುಡುಗಿಯರ  ಅರ್ಧ ಮುಕ್ಕಾಲು ಮಿಡಿಗಳಷ್ಟೇ ಎಂಬಷ್ಟರ ಮಟ್ಟಿಗೆ ಸಂವೇದನೆ ಹಳ್ಳ ಹತ್ತಿಸಿದ ಊರಿನ ಮೇಲೆ ತಾತ್ಸಾರ ಬೇರೆ.

ಮನೆ ಬಂತು. ಇನ್ನೊಂದಿಷ್ಟು  ನೆನಪಿನೊಂದಿಗೆ .ಚಂದನಳ ಶ್ರೀಪದಕಕ್ಕ ಬಂದಾ ಎಂಬ ಕೂಗಿನೊಂದಿಗೆ.