Tuesday, June 28, 2011

ತಲೆಮಾರು -೧



ರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರ ಶರ್ಮ ಮಗನನ್ನು ತರಾಮಾರಿ ಬೈಯ್ಯುತ್ತಿದ್ದರು.
"ನಿನ್ ವಯ್ಯಸ್ಸಿಗೆ ನನಗೆ ಗಂಜಿ ಗಂಜಿಗೆ ಗತಿ ಇರಲೇ ಗೊತ್ತಾ??., ಹಸಿದ ಹೊಟ್ಟೆಯಲ್ಲಿ  ಕವಚಿ ಮಲಗುತ್ತಿದ್ದೆ ರಾತ್ರಿ.,ವಾರಾನ್ನ ಮಾಡಿ ಈ ., ಇವತ್ತಿನ ಹಂತಕ್ಕೆ ಬಂದಿದ್ದೇನೆ ,ನಿನಗೇನು ಕಡಿಮೆ ಹಾಂ".,,"ನಾನು ಗಂಜಿ ಕುಡಿಯುತ್ತಿದ್ದ ಕಾಲಕ್ಕೆ ನೀನು ಎಣ್ಣೆ ಹೊಡ್ಯುತ್ತಿಯಾ ನಾಚಿಕೆ ಆಗಬೇಕು ನಿನ್ನ ಜನ್ಮಕ್ಕೆ. ಛೀ"

ಶಶಾಂಕ ಶರ್ಮ ಮೆದುಳು ತಕ್ಷಣಕ್ಕೆ ಕೆಲಸ ಮಾಡುವುದನ್ನೇ ನಿಲ್ಲಿಸಿದಂತಿತ್ತು.ಈ ಪರಿ ಅಪ್ಪನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಅಂತ ಅಂದಾಜು ಇರಲಿಲ್ಲ ಮಾರಾಯನಿಗೆ.ಉತ್ತರವಾದರೂ ಏನು ಕೊಟ್ಟಾನು??.
ಇನ್ನೊಮ್ಮೆ ಕುಡಿದದ್ದು ಕಂಡರೆ ಕಾಲು ಮುರಿದು ಬಿಡುತ್ತೇನೆ ಎಂಬ ಎಚ್ಚೆರಿಕೆಯ ಮಾತಿನೊಂದಿಗೆ ಅವತ್ತಿನ ಪ್ರಹಸನ ಮುಗಿದಿತ್ತು.

-------------------------------------------------------------------------------------------------------------
ಮಲಗಿದ ರಾಜೇಂದ್ರ ಶರ್ಮನಿಗೆ ಬಾಲ್ಯದ ನೆನಪುಗಳು ತಲೆ ತುಂಬಿಕೊಂಡವು.
ಅಮ್ಮಾ ...ಎಂದಳುತ್ತಾ  ತರಚಿದ ಕಾಲಿನೊಂದಿಗೆ ಬಂದಾಗ ಆ ಕಾಂಗ್ರೆಸ್ಸ್ ಸೊಪ್ಪಿನ ರಸ ಹಚ್ಚಿ ರಕ್ತ ಕಟ್ಟಿಸಿದ ಆಯಿ.ರಾತ್ರಿಯ ಅನ್ನವೇ ., ಬೆಳಗಿನ ಹುರಿದನ್ನದ ಮುಖವಾಡ ಹೊತ್ತು ., ಹೊಟ್ಟೆಯ ಪಾಡಿಸಿದ ನೆನಪುಗಳು ಹಾಯತೊಡಗಿದವು  

ರಾಜೇಂದ್ರ ಹುಟ್ಟಿದ ಊರು ಲಿಂಗನಮಕ್ಕಿ ಜಲಾಶಯದ ನೀರ ಹೊಟ್ಟೆಯೊಳಗೆ ಮಲಗಿತ್ತು.ಕೊಪ್ಪಲಮನೆ ಎಂಬ,ಅಕ್ಷರಶಃ ಮೂರು ಮತ್ತೊಂದು ಮನೆ ಇದ್ದ ಊರದು.ಅಪ್ಪ ಅಮ್ಮ ಅಜ್ಜ ಅಜ್ಜಿ ಮತ್ತು ೭ ಜನ ಸಹೋದರ -ಸಹೋದರಿಯರಲ್ಲಿ ನಾಲ್ಕನೆಯ ಮಗ ರಾಜೇಂದ್ರ ಶರ್ಮ.ಬಹುಶಃ ಹುಟ್ಟಿದಾಗ ,ಆ ಹುಟ್ಟಿಗೊಂದು ಕಾರಣ ಇರಲೇ ಬೇಕೆಂಬ, ಸಾಧನೆಯ ಸಾಧನ ಆಗಲೇ ಬೇಕೆಂಬ ಮಹತ್ವಾಕಾಂಕ್ಷೆ ಯಾರಲ್ಲೂ ಇದ್ದಿದ್ದು ಸುಳ್ಳು.ಮನೆಯ ಎದಿರಿಗಿನ ಸೊಂಪಾದ ತೋಟ. ಅದರಾಚೆಗೆ ಹೊಳೆವ ಹೊಳೆ.ವೈಷ್ಣ ಹೊಳೆ ಅಂತ ಕರೆಯುತ್ತಿದ್ದರದಕ್ಕೆ.ಅದೇ ಹೆಸರೋ ಅಥವಾ ಯಾವದಾದರೂ ಹೆಸರಿನ ಅಪಭ್ರಮ್ಷವೋ ಕೆದಕಿದವರಿಲ್ಲ.ಅಲ್ಲೇ ರಾಜೇಂದ್ರ ಈಜು ಕಲಿತದ್ದು.ದೊಡ್ಡಣ್ಣ ಹಿಯಾಳಿಸುತ್ತಲೇ.,ಕಲಿಸಿಕೊಟ್ಟಿದ್ದ.ಅಷ್ಟಕ್ಕೂ ಈಜು ಒಂದು ಮೂಲಭೂತ ಅಗತ್ಯವೇ ಆಗಿತ್ತು.೬ ಮೈಲು ದೂರದ ಶಾಲೆಗೆ ಇದೆ ಹೊಳೆಯನ್ನ ತೆಪ್ಪದ ಮೇಲೆ ದಾಟಬೇಕಿತ್ತು.

ಹೊಳೆ ನೀರು., ಹಾವು ಹಸೆ ,ಸಂಕ .,,ಎಲ್ಲವನ್ನೂ ಬದುಕಿನ ಒಂದು ಭಾಗವಾಗೆ ನೋಡುತ್ತಾ ತೆಗೆದುಕೊಳ್ಳುತ್ತಾ ಬೆಳೆದ ಜನಗಳ ಮದ್ಯ ರಾಜೇಂದ್ರನೂ ಒಬ್ಬನಾಗಿದ್ದ.ಅವನ ಜೀವನದ ಬಹಳ ದೊಡ್ಡ ತಿರುವು ., ಶರಾವತಿ ನದಿ ನೀರಿನ ತಿರುವಿಗೆ ಆಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿದ್ದು.ನಮ್ಮದು ಮುಳುಗಡೆ ಪ್ರದೇಶವಂತೆ ಅಂತ ಕೇಳಿದಾಗಲೇ ., ಆ ಭಾಗದ ಜನರ ಎದೆ ಬಡಿತ ದಸಕ್ಕೆನ್ದಿತ್ತು.ದೊಡ್ಡವರ ಭಾವನೆಗಳ ತುಮುಲ ಅರ್ಥವಾಗುವ ವಯಸ್ಸಲ್ಲ ಅವನದು.ಮನೆಯ ಅಪ್ಪ -ಅಜ್ಜಂದಿರು ಗುಳೆ ಏಳುವ ವ್ಯವಸ್ಥೆಯಲ್ಲಿ ತೊಡಗಿದ್ದರೆ., ರಾಜೇಂದ್ರ ಅಣ್ಣ ತಮ್ಮಂದಿರ ಜೊತೆ  "ಹೇ ಇವತ್ತು ಹೊಳೆ ಇಷ್ಟು ಮೇಲೆ ಬಂದಿದೆ" ಅಂತ ಲೆಕ್ಕ ಹಾಕುತ್ತಿದ್ದ.

ಆಮೇಲೆ ಬೆಂಗಳೂರಿಗೆ ಬಂದಿದ್ದು.ಮೈಯ ಬೆವರ ಪ್ರತಿಹನಿಯು ಇಂದು ಸಾಮ್ರಾಜ್ಯವಾಗಿ ನಿಂತಿದೆ.ಕೆಲವೊಂದು ದಿವಸ ಕಾಲಿ ಅರ್ಧ ಕಪ್ಪು ಚಾದಲ್ಲೇ ದಿನದ ಜೀವನ ಮುಗಿಸಿ ಬಂದದ್ದುಂಟು.ಯಾಕೆ ಮಗ ಹೀಗಾಗುತ್ತಿದ್ದಾನೆ ಹೇಳುವುದೇ ಅರ್ಥವಾಗದ ವಿಷಯವಾಗಿಬಿಟ್ಟಿದೆ.ಚನ್ನಾಗಿ ಓದಲಿ .ತನ್ನಂತೆ ಕಷ್ಟ ಪಡದೆ ಇರಲಿ ಎಂದು ಅಂತಾರಾಷ್ಟ್ರೀಯ ಮಟ್ಟದ ಶಾಲೆಗೇ ಸೇರಿಸಿದ್ದೇನೆ.ಜನಮಾನಸದ ಮದ್ಯೆ ಕೀಳು ಆಗದಿರಲಿ ಹೇಳುವ ಕಾರಣಕ್ಕೆ ಲಕ್ಷ ಕೊಟ್ಟು ಎಂಜಿನೀರ್ ಓದಿಸುತ್ತಿದ್ದೇನೆ.ಅದರೂ ..ಯಾಕೊ ತಾನು ಹೇಳಿದ ಮಾತು ಕೇಳುತ್ತಿಲ್ಲ ಶಶಾಂಕ ಹೇಳುವುದು.ನಿಧಾನಕ್ಕೆ ಅರ್ಥವಾಗುತ್ತಿದೆ.

ಯಾಮಿನಿ ಆತನ ರಾತ್ರಿಯ ತಬ್ಬಿಕೊಂಡಿತು.
                                                                                                                             (contd....)

Sunday, June 19, 2011

ಜಾಗತೀಕರಣ ಮತ್ತು ಅಪ್ಪಂದಿರ ದಿನ

ಗಣಪತಿಯ ಆಕಾರವೇ ಎಷ್ಟು ವಿಚಿತ್ರ ಅಲ್ಲವಾ..ಒಂದು ಬಗೆಯ ವಿಚಿತ್ರ ಅಕಾರ .ಡೊಳ್ಳು ಹೊಟ್ಟೆ ,ಸೊಂಡಿಲು ,ಇಲಿ ಹಾವು ..ನಾವು ವಿಕಾರ ಮತ್ತು ಅಪೂರ್ಣತೆಯನ್ನ ಪೂಜೆ ಮಾಡ್ತು. ಪೂರ್ಣತೆಯ ಹಂಬಲಕ್ಕಾ??..ಬಿಡು.ಮೊದಲು ಮೃಥಿಕಾ ಪೂಜೆ ಅಂತ ಮಣ್ಣನ್ನೇ ತಂದು ಪೂಜೆ ಮಾಡಿ ಹಾಗೆ ವಿಸರ್ಜನೆ ಮಾಡ್ತಿದ್ದರಂತೆ. ಆ ಮೇಲೆ ಮೆಲ್ಲ ಮೆಲ್ಲನೆ ಆಕರ ಬರೋಕೆ ಶುರುವಾಗಿರಬೇಕು.ಚೌತಿ ಹಬ್ಬ ಅಂದರೆ ದೂರ್ವೆ ಗುಡ್ಡ ಹತ್ತಿ  ಕಿತ್ತು ತರುವ  ಗರಿಕೆ ,ವಿಷ್ಣು ಕಾಂತಿ. ಮನೆಯಲ್ಲಿ ದೇವರ ಮಂಟಪದ ಎದುರು ಇರುವ ಅಟ್ಟಣಿಗೆಯಲ್ಲಿ ಕಟ್ಟುವ ಪಲವುಳಿಗೆ (ಫಲಾವಳಿ)ಆ ಹೊತ್ತಿಗೆ ಬಿಡುವ ಹಣ್ಣು ಹೂವು ,ಕಾಡಿನ ಎಂತೆತದೋ ಹೂವು.ಅವೆನ್ನೆಲ್ಲ ತಂದು ಕಟ್ಟೋದು ರೂಡಿ.ಸುತ್ತ ಮುತ್ತ ಸಿಗುವುದರಲ್ಲೇ ಹಬ್ಬಕ್ಕೆ ಚಂದ ಮಾಡುವ ಸಡಗರ.ಮನೆ ಎದುರು ಮಾವಿನ ಚಂಡೆ ,ಚಕ್ಕುಲಿ ಕಾಯಿಕಡುಬು.,ಸರಿಯಗುವುದ್ದಕ್ಕಿಂತ ಹಾಳೆ ಆಗುವ ಪಂಚಕಜ್ಜಾಯದ  ಹದ.

ಹಬ್ಬಕ್ಕೆ ವಾಸನೆ ಇರ್ತದೆ ಅಂದ್ರೆ ಯಾರದ್ರೂ ನಗಬಹುದು ,ಆದ್ರೆ ನಮಗೆ ಬರಲಿಕ್ಕಿಲ್ಲ.ಚೌತಿ ಹಬ್ಬ ಬರೋ ಹೊತ್ತಿಗೆ ಮಳೆಗಾಲದ ದೊಡ್ಡ ಹೊಡೆತ ಮುಗಿದಿರುತ್ತದೆ.ಹೂ ಬಿಡೋ ಗಿಡ ಎಲ್ಲ ಹೂ ಬಿಟ್ಟು ಜೋತಾಡ ತೊಡಗುತ್ತಿರುತ್ತವೆ.ಕೆಸರು ಥಂಡಿ ಎಲ್ಲ ಒಣಗಿದ್ದರು ತೇವ ಏನೂ ಹೋಗಿರೋದಿಲ್ಲ.ನಮ್ಮ ಮನೆಗಳಲ್ಲಿ ಚಕ್ಕುಲಿಯ ಪರಿಮಳ ಬರೋದು ಚೌತಿಲಿ ಮಾತ್ರ ಅಲ್ವ.ಚೌತಿ ಹಬ್ಬದ ಹಾಡನ್ನ ಬೇರೆ ಯಾವಾಗಲು ಹೇಳಲ್ಲ.ಜೋರು ಜಂಗಟೆ  ಆಗೀಗ ಬೀಳುವ ಹನಿ ಹನಿ ಮಳೆ.ಎಲ್ಲ ಸೇರಿ ಒಂದು ಆವರಣ ಸೃಷ್ಟಿಯಾಗಿರತ್ತೆ.ಚೌತಿ ಹಬ್ಬ ಅಂದ್ರೆ ಇದೆಲ್ಲ ನೆನಪಿಗೆ ಬರತ್ತಲ್ವಾ.ದೀವರು ಗೌರಿ ಬಿಡುವ ವರೆಗಿನ ಎಲ್ಲ ಚಿತ್ರಣಗಳೂ.

ಬರೀ ಚೌತಿಗಲ್ಲ ,.ನವರಾತ್ರಿಗೆ ದೊಡ್ದಬ್ಬಕ್ಕೆ.,ಈಗಲೂ -ಮಟ ಮಟ ಮಧ್ಯಾನ್ನದಲ್ಲೂ ಕಣ್ಮುಚ್ಚಿ ಕುಳಿತರೆ ಆ ಘಮ ಮೂಗಿಗೆ ಬಡಿಯತ್ತೆ. ಒಳಗೆಲ್ಲೋ ಇಳಿದು ನಡುಮನೆಯ ಮಂದ ಕತ್ತಲು ,ವಳ್ಳೆಣ್ಣೆ   ಕಂಪು ಗಂಟೆಯ ಶಬ್ದ ತುಂಬಿಕೊಳ್ಳುತ್ತದೆ. ಶ್ರೀಪಾದು ಈ ವಾಸನೆಯನ್ನ ಹಿಡಕೊಂಡ್ರೆ ಮಾತ್ರ  ನಾವೆಲ್ಲ ಹೇಳುವ "ಜಾಗತೀಕರಣ" ವನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ.ನೋಡು ನಾನು ನೀನು ಈಗ ದೂರ್ವೆ ಕೊಯ್ಯೋದಿಲ್ಲ.ಫಲವುಳಿಗೆ ಬಹುಷಃ ದೊಡ್ಡಪ್ಪ ಶಾಸ್ತ್ರಕ್ಕೆ ಅಂತ ಕಡ್ತಾರೆ.ಅಮ್ಮ ಒಬ್ಳೇ ಚಕ್ಲಿ ಮಾಡಬೇಕಲ್ಲ ಅಂತ ಮಾಡೋದು. ಈಗಿನ ಮಕ್ಳು ನಾನು ಜನ್ಗಟೆ ಹೊಡಿತಿ ,ನಂಗೆ ಜನ್ಗಟೆ ಬೇಕು ಅಂತ ಅತ್ತು ರಂಪ ಮಾಡೋದಿಲ್ಲ.ಗರಿಕೆ ಹುಲ್ಲು ಬೇಕೇ ಬೇಕು ಅಂತ ಇಲ್ಲ. ಗಣಪತಿ ಸಾಗರದಿಂದ ಬರತ್ತೆ ಮತ್ತು ನಾನು ನೀನು ಎಲ್ಲ "ಗಣೇಶ ಚತುರ್ಥಿ"ಗೆ ಅಂತ ಕೊಡುವ ರಜಕ್ಕೆ ಊರಿಗೆ ಬರ್ತೇವೆ.ಹಬ್ಬದ ದಿನ ನಮಗೆ ಮೀಟಿಂಗ್ ಇದ್ರೆ ಮೀಟಿಂಗೆ ಮುಖ್ಯ. ಹಬ್ಬ ಏನೂ ಮುಂದಿನ ವರ್ಶಾನೂ ಬರತ್ತೆ ಅಲ್ವ.

"ಅಪ್ಪಂದಿರ ದಿನ " ಹೆಸರು ಕೇಳಿದ್ರೆ ಗೊತಾಗತ್ತೆ ಅದು ನಮ್ಮ ಹಬ್ಬ ಅಲ್ಲ ಅಂತ,.ಪಿತೃ ದೇವೋ ಭವ ಅಂತ ದಿನಾ ಮಂತ್ರದಲ್ಲಿ ಹೇಳ್ತಿವಿ ನಾವು.ಪ್ರೀತಿಸುದಕ್ಕೆ .,ಅದನ್ನ ವ್ಯಕ್ತ ಪಡಿಸುವುದಕ್ಕೆ ಇಂತದ್ದೆ ದಿನ ಹೇಳಿ ನಾವು ಮಾಡಿತ್ತುಕೊಂಡಿದ್ದಲ್ಲ.ಅಪ್ಪನ ಪ್ರೀತಿಯನ್ನ ಕೇವಲ ಒಂದು ದಿನಕ್ಕೆ ಫಾರ್ಮಾಲಿಟಿ ಮಾಡಿಕೊಂಡಿಲ್ಲ ನಾವು.ಬಹುಷಃ ನಾವು ದಿನವೂ ಅಪ್ಪನ ಕಾಲಿಗೆ ನಮಸ್ಕಾರ ಮಾಡಿಯೇ ತೀರ್ಥ ತಗೊಳ್ತಿವಿ.ಅಲ್ವಾ

ಇದಕ್ಕೆ ಏನಂತ ಹೆಸರಿಡೋಣ .ನಮ್ಮ ಮನೆಯ ಚೌತಿ ಹಬ್ಬ ಅರಿವಿಗೆ ಬರದಂತೆ ನಿಸ್ತೇಜವಾಗೋದು.ಮಾರಿಜಾತ್ರೆ ಮೂಡ ನಂಬಿಕೆ ಅನ್ಸೋದು.fathers day ,mothers day  feb-14 ನಮ್ಮ ಮನೆಯಂಗಳಕ್ಕೆ ಮನೆಯೊಳಗೇ ಬಂದು ಕೂರೋದು.ಹೊಗೊಪ್ಳಲ್ಲಿ ಇನ್ನೊಂದು ಹತ್ತು ವರ್ಷಕ್ಕೆ  ಜನವೇ ಇಲ್ಲದಂತಾಗುವುದು.ಇನ್ನೊಂದು ಇಪ್ಪತ್ತು ವರ್ಷಕ್ಕೆ  ಜನ ಯಾರೂ ಇರಲ್ಲ ಹೇಳಿ ವಾಪಸ್ಸು ಹೋಗ್ತಾರೆ ಅಂತ ದೀವರು ಗೌರಿ ಹಬ್ಬದ ದಿನಾನೆ ಗೌರಿನ ಹೊಳೆಗೆ ಬಿಟ್ಟು ಬರುವಂತಾಗುವುದು.??

ಇದ್ಯಾವ್ದೂ ಅರ್ಥವಾಗದೆ ದೇಶದ ಬಗ್ಗೆ ,ಜಾಗತೀಕರಣದ ಬಗ್ಗೆ ,ಪ್ರಗತಿಯ ಬಗ್ಗೆ ,ನಮಗೆ ಬೇಕಿರುವ ಪ್ರಗತಿಯ ಬಗ್ಗೆ  ಮಾತಾಡಿ ಪ್ರಯೋಜನವಿಲ್ಲವೇನೂ???

(ನನಗೆ ಬಂದ ಒಂದು ಪತ್ರ, ಅಪ್ಪಂದಿರ  ದಿನದ ಭರಾಟೆಯ ಹಿನ್ನಲೆಯಲ್ಲಿ ಹಾಕ್ತ ಇದ್ದಿ )

Monday, June 13, 2011

ತಲ್ಲಣಿಸದಿರು ಕಂಡ್ಯ ತಾಳು ಮನವೆ..............

ಆತ್ಮೀಯ .,

ನಮ್ಮ ಅತೃಪ್ತಿ ಮತ್ತು ಮಿತಿಗಳು ನಮಗೆ ಕಾಣುವುದಕ್ಕೆ ಶುರುವಾಗುವುದು ನಮ್ಮೆದುರು ಆ ಕೊರತೆ ಇಲ್ಲದವರು ನಿಂತಾಗ.ಅಂಥದೊ ಮಂಕು ಸಿಟ್ಟು ಬೇಜಾರು ,ನಮ್ಮ ಖುಷಿಯ ಸಂತೋಷದ  ಒಂದಷ್ಟು ಕ್ಷಣಗಳನ್ನ  ಯಾರೋ ನಮ್ಮಿಂದ ಕಿತ್ತುಕೊಂಡು ಬಿಟ್ಟರು ಅನ್ನುವ ಸಿಟ್ಟು.ಈ ದುಗುಡ ಶಾಂತ ಆಗೋದು ಮತ್ತೆ ಅಮ್ಮ ನೆನಪಾಗಿ ,ಹಪ್ಪಳ ಉಪ್ಪಿನಕಾಯಿ ಮಾಡುವುದರಲ್ಲೇ ಖುಷಿ ಕಾಣುವ ಅಮ್ಮ .ಅಜ್ಜಿ.ಇದನ್ನೆಲ್ಲಾ ದಾಟುವುದಕ್ಕೆ ಸಾದ್ಯವಿದ್ದೂ ದಾಟದ ,.ಇಂತದ್ದಕ್ಕೆಲ್ಲ ಹೊಂದಿಕೊಳ್ಳಲಾಗದೆ ಮೀರುವ ದಾರಿಯೂ ಗೊತ್ತಿಲ್ಲದೇ ಒದ್ದಾಡುವ ನೆಂಟರಿಷ್ಟರು  ಇವರೆಲ್ಲ ನೆನಪಾದಾಗ .ದಿನನಿತ್ಯದ ಅಗತ್ಯಗಳಿಗೆ ಬಲವಂತದ ಕಡಿವಾಣ ಹಾಕಿ ಕೇಳಿದಾಗ ದುಡ್ಡು ಕೊಡುವ ಅಪ್ಪ ನೆನಪಾದಾಗ.
ಅದರೂ
ಏನೋ ಕಹಿ ಏನೋ ಕೊಸರು ಒಳಗೊಳಗೆ ವಿಷವಾಗಿಬಿಡುವ ಭಯ.
ಎಲ್ಲರೂ ಕ್ಯಾಮೆರಾ ಇರುವ ಮೊಬೈಲ್ ತಗೊಂಡಾಗ ., ಕೈಲ್ಲಿ ಸೆಲ್ಲೆ ಇಲ್ಲದ ನಾವು ಕಿಳರಿಮೆಯಿಂದ ನರಳುವಾಗ ,ಅದನ್ನೇ ಬೇರೆಯವರು ಎತ್ತಿ ಆಡಿದಾಗ  ಯಾಕೋ ಅಳು ಬಂದು ಬಿಡ್ತದೆ.ಛೆ ಯಾವಾಗ ಇದೆಲ್ಲ ಮುಗಿಯುತ್ತದೆ.ನನ್ ಹತ್ರ ಯಾರೂ ಹೊಸ ಸಿನಿಮ ಬಗ್ಗೆ ಕೇಳಲ್ಲ.ಹೊಸ ಫ್ಯಾಶನ್ ಬಗ್ಗೆ ಮಾತಾಡಲ್ಲ.ಬೇರೆ ಹುಡುಗಿಯರ ಜೊತೆ ಮಾತನಾಡುವ ಹಾಗೆ ಮಾತಾಡಲ್ಲ.ಹೇಗೆ ಇದನ್ನೆಲ್ಲಾ ನಿನಗೆ ಮೀರುವುದಕ್ಕೆ (?!) ಸಾದ್ಯವಾಯಿತು  ಅಂತೆಲ್ಲ ಕೇಳ್ತಾರೆ.ಯಾಕೆ ನಿನಗೆ ಬೇರೆ ಹುಡುಗಿಯರ ತರಹ ಆಕರ್ಷಕವಾಗಿ ಡ್ರೆಸ್ ಮಾಡಿ ಮಿಂಚಬೇಕು ಅನ್ಸಲ್ಲ ಅಂತ ಕೇಳ್ತಾರೆ.ಹೇಗೆ ಹೇಳಲಿ ಅದೆಲ್ಲ ನಾನು  ಆಯ್ಕೆ ಮಾಡಿಕೊಂಡದ್ದು ಅಲ್ಲ ಅಂತ. ಒದಗಿ ಬಂದದ್ದು ಅಂತ.

ಹೇಳಿಕೊಳ್ಳದಿದ್ದರೆ ವಿಷವಾಗಿಬಿಡುವ ಭಯ., ಹೇಳಿಕೊಂಡರೆ ಖಾಸಗಿತನವೆಲ್ಲ ಕಳೆದುಕೊಂಡು ಕಾಲಿ ಕಾಲಿ ಅದಂತೆ.

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ.........


ಯಾಕೋ ಎಲ್ಲ ಜಾಳು ಜಾಳು ಪದಗಳೆನ್ನಿಸುತ್ತಿದೆ.ನಿನ್ನ ನೆನಪೊಂದು ಬಿಟ್ಟು .



ಪ್ರೀತಿಯಿಂದ