Sunday, May 29, 2011

ಹೀಗೊಂದು ಕನ್ನಡಿ ಕಥಾನಕ

ಅದೊಂದು ಚಂದದ ಕನ್ನಡಿ.ಮೂಲೆಗಳೇ ಇಲ್ಲದ ನವಿಲಿನ ಗರಿಯ ರೂಪುಗಳುಳ್ಳ ಮೇಲ್ಪದರದಲ್ಲಿ ಅನ್ಕುಡೊಂಕಿಲ್ಲದ ಎಲ್ಲರೂ ಇಷ್ಟ ಪಡುತ್ತಿದ್ದ ಕನ್ನಡಿ.ಕನ್ನಡಿಗೆಲ್ಲ ಇರುವ ಮತ್ತೊಂದು ವಿಶೇಷತೆ ಅಂದ್ರೆ ಅದು ಹಿಂದೆ ಮರೆಸಿ ಮುಂದೆ ತೋರಿಸುತ್ತದೆ.ಎಲ್ಲ ಜನರು ಬಯಸುವಂತೆ.ಒಳಗೇನು ಹೇಳುವದರಕ್ಕಿಂತ ಹೊರಗೆ ಏನು ಹೇಳುವಂತೆ.ಮುಖವಾಡದ ಅಂತ್ಯಂತ ಸುಂದರ ಮೂರ್ತರೂಪ ,ವಿಶೇಷ ಸೃಷ್ಟಿ ಕನ್ನಡಿ. ಒಳಗೆ ಏನೂ ಹೊರಗೆ ಮತ್ತೊಂದೇನೂ.

ಪಾಪ ನಮ್ಮ ಈ ಕಥೆಯ ಕನ್ನಡಿಗೆ ಅವೆಲ್ಲದರ ಜೊತೆ ಮತ್ತೊಂದು ಶಕ್ತಿ  ಇತ್ತು., ಎದುರಿಗೆ ಇದ್ದಿದ್ದರ ಬಿಂಬ ಚನ್ನಾಗಿತ್ತೋ ಇಲ್ಲವೂ ಪ್ರತಿಬಿಂಬ ಸುಂದರವಾಗಿರುತ್ತಿತ್ತು.ಚಂದಾಮಮನ ಕತೆಯಲ್ಲಿ ಬರುವ ಮಾಯಾ ದರ್ಪಣದ ತರಹ.ಗಜಾಗಮಿನಿಯನ್ನು ಹಂಸಗಮನೆಯನ್ನಾಗಿಯೂ .,ಅಷ್ಟಾವಕ್ರನನ್ನು ಸ್ಪುರದ್ರೂಪಿಯನ್ನಾಗಿಯೂ ತೋರಿಸಬಲ್ಲ ಅದ್ಬುತ ಕಲೆ ಇತ್ತು.ಸಹಜವಾಗಿ ಎಲ್ಲರಿಗೂ ಪ್ರಿಯವಾಗಬಲ್ಲ ಗುಣ.ಎಲ್ಲರು ಬಂದು ಪ್ರತಿಬಿಂಬವ ನೋಡಿ ಖುಷಿ ಪಡುವವರೆ.

ಕನ್ನಡಿಯ ಮನಸಿನ ಒಳಗಿನ ತಲ್ಲಣವ ಅರ್ತ ಮಾಡಿಕೊಳ್ಳುವ ಗೂಜಿಗ್ಯಾರೂ ಹೋಗುತ್ತಿರಲಿಲ್ಲ.ಕನ್ನಡಿಗ್ಯಾರು ಕನ್ನಡಿ ಹಿಡಿದಿರಲಿಲ್ಲ.ಅದೊಂದು ಕಾಳ ರಾತ್ರಿ.ಕಾಕೋಳು ರಾಮಯ್ಯನ ಕಾದಂಬರಿಯಲ್ಲಿ ಬರುವಂತಹದ್ದು.ಕನ್ನಡಿ ತನ್ನೊಳಗಿನ ಬವಣೆಗಳ ಭಾವನೆಗಳ  ಎಲ್ಲ  ಹೊರಹಾಕುವ ನಿರ್ಧಾರದೊಂದಿಗೆ ರೂಪ., ಗುಣಗಳ ಬದಲು ಮಾಡಿಕೊಂಡು ಬೆತ್ತಲಾಗಿತ್ತು.ಜಗತ್ತನ್ನ ಬೆತ್ತಲು ಮಾಡುವ ಹಂಬಲದೊಂದಿಗೆ.

ಮರುದಿನ ಗಜಗಮನೆ  ಗಜಗಮನೆಯಾಗೆ ಇದ್ದಳು.ಮತ್ತೆ ಅಷ್ಟಾವಕ್ರಾ ಅಷ್ಟವಕ್ರನಾಗೆ .ನಿಜವ ಅರಗಿಸಿಕೊಳ್ಳುವ ., ಹೊಟ್ಟೆಗಿಳಿಸಿ ಭುಜಿಸಿಕೊಳ್ಳುವ ಮನವಾಗಲಿಲ್ಲ.ಕಲ್ಲು ಹೊಡೆದರು .ಕನ್ನಡಿಯ ರೂಪ ಕಳಚಿಕೊಳ್ಳುವ ಹಂಬಲಕ್ಕೂ ಸೇರಿಸಿ . ಚೂರಾಯಿತು.ಕನ್ನಡಿಯ ಅಳುವ ಕಾಣುವ ಕನ್ನಡಕ ಯಾರಲ್ಲೂ ಇರಲಿಲ್ಲ.

"ನಮ್ಮ ಕನ್ನಡಿ ಹೀಗೆ ಅಂತ ಗೊತ್ತಿರಲಿಲ್ಲ"
"ಕನ್ನಡಿಯ ಒಳಗೆ ಇನ್ನೆಷ್ಟು ಬಣ್ಣವೋ"
"ಈ ಕನ್ನಡಿ ಸರಿ ಇಲ್ಲವೆಂದು ಕಾಣಲೇ ಇಲ್ಲ . ಛೆ"

ಆಳಿಗೊಂದು ಕಲ್ಲು .,.,ಅವಕಾಶ ಬಿಟ್ಟಾರೆಯೇ??.ಕನ್ನಡಿಯ ಕಲ್ಲೆದೆ ಒಡೆಯಿತು.ಬಿಂಬಗಳು ಮುಸುಕಾಗತೊಡಗಿದವು.ಕನ್ನಡಿಯಿಂದ ಕುಶಿ ಪಡೆದವರ ಕವಾಟಗಳು ಬದಲಾಗಲಿಲ್ಲ.ಒಬ್ಬ ಸಹೃದಯಿ ಬಂದ ಎಲ್ಲಿನ್ದಾನೋ.ಮರುಭೂಮಿಯಲ್ಲಿ ಅಪರೂಪಕ್ಕೆ ಸಿಗುವ ಓಯಸಿಸ್ ತರಹ. ನೋಡಲಾಗಲಿಲ್ಲ ಕನ್ನಡಿಯ ಕಣ್ಣಿರ.ತೇಪೆ ಹಚ್ಚಿದ.ಅಂಟಿಸಿದ.ಒಂದಿಷ್ಟು ಮೂಲೆಗಳೊಂದಿಗೆ ಮತ್ತೆ ಗಾಜು  ಕನ್ನಡಿಯಾಯಿತು.

ಇಂದು ಮನ್ಮಥನ ಪ್ರತಿಬಿಂಬ ಕೂಡ ಅಂಕುಡೊಂಕು.



No comments:

Post a Comment